ಮಾಮ್‌ಕೋಸ್
MAMCOS
ಮಾಮ್‌ಕೋಸ್ ಗೆ ಸುಸ್ವಾಗತ — 1939 ರಿಂದ ನಿರಂತರ ನಿಮ್ಮ ಸೇವೆಯಲ್ಲಿ
ಬೇಸಾಯ ಕ್ರಮಗಳು · Cultivation

ಅಡಿಕೆ ಬೆಳೆಯ ಸಮಗ್ರ ಬೇಸಾಯ ಕ್ರಮಗಳು

Comprehensive Areca Cultivation Practices

ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ — ಅಡಿಕೆ ಸಂಶೋಧನಾ ಕೇಂದ್ರ, ನವಿಲೆ, ಶಿವಮೊಗ್ಗ

ಅಡಿಕೆ ಒಂದು ಬಹುವಾರ್ಷಿಕ ಬೆಳೆಯಾಗಿದ್ದು, ಮುಖ್ಯವಾಗಿ ಕರ್ನಾಟಕದ ಮಲೆನಾಡು, ಕರಾವಳಿ ಹಾಗೂ ಮೈದಾನ ಪ್ರಾಂತ್ಯದ ಪ್ರಮುಖ ವಾಣಿಜ್ಯ ಬೆಳೆ. ಭಾರತದಲ್ಲಿ ಅಡಿಕೆಯನ್ನು ಪ್ರಸ್ತುತ 9.38 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದು 13.69 ಲಕ್ಷ ಟನ್‌ಗಳಷ್ಟು ಉತ್ಪಾದನೆ ಮಾಡಲಾಗುತ್ತಿದೆ (DASD, 2022-23). ಕರ್ನಾಟಕ ರಾಜ್ಯವು ಅಡಿಕೆ ಬೆಳೆಯ ಕ್ಷೇತ್ರ ಹಾಗೂ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದೆ — ಭಾರತದಲ್ಲಿ ಬೆಳೆಯುವ ಒಟ್ಟು ಅಡಿಕೆಯ ಶೇ.75 ರಷ್ಟು ಇಲ್ಲಿಯೇ ಉತ್ಪಾದನೆಯಾಗುತ್ತಿದೆ. ಬೆಳೆಯಲ್ಲಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳುವುದರ ಜೊತೆಗೆ ಉತ್ಪಾದಕತೆ ಹೆಚ್ಚಿಸಲು ವೈಜ್ಞಾನಿಕ ಬೇಸಾಯ ಮತ್ತು ಸಸ್ಯ ಸಂರಕ್ಷಣಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ.

ಮಣ್ಣು ಮತ್ತು ಹವಾಗುಣ Soil & Climate

  • ನೀರು ಬಸಿದು ಹೋಗುವ ಕೆಂಪು ಗೋಡು, ಜಂಬಿಟ್ಟಿಗೆ ಅಥವಾ ಮೆಕ್ಕಲು ಗೋಡು ಮಣ್ಣು ಸೂಕ್ತ. ನೀರು ನಿಲ್ಲುವ ಜೌಗು ಮತ್ತು ಸವಳು ಮಣ್ಣು ಯೋಗ್ಯವಲ್ಲ.
  • ಮಣ್ಣಿನ ರಸಸಾರ (pH) 6 ರಿಂದ 7 ಸೂಕ್ತ.
  • ಗಾಳಿಯಲ್ಲಿ ಹೆಚ್ಚು ತೇವಾಂಶ ಮತ್ತು 15° – 30° ಸೆ. ಉಷ್ಣಾಂಶವಿರುವ ವಾತಾವರಣ ಬಯಸುತ್ತದೆ.
  • ಸಮುದ್ರ ಮಟ್ಟದಿಂದ 1000 ಮೀಟರ್ ಎತ್ತರದವರೆಗೆ ಬೆಳೆಯಬಹುದು.
  • ಮಲೆನಾಡಿನಲ್ಲಿ ವರ್ಷಕ್ಕೆ 4500 ಮಿ.ಮೀ., ಮೈದಾನದಲ್ಲಿ 750 ಮಿ.ಮೀ. ಮಳೆ ಬೀಳುವ ಪ್ರದೇಶಗಳಲ್ಲಿ ಬೆಳೆಯುತ್ತಾರೆ. ಕಡಿಮೆ ಮಳೆಯ ಪ್ರದೇಶಗಳಲ್ಲಿ ನೀರಾವರಿ ಅಗತ್ಯ.

ತಳಿಗಳು Recommended Varieties

ಬೆಳೆಯ ಆರ್ಥಿಕ ಇಳುವರಿಯು ತಳಿಯ ಮೇಲೆ ಅವಲಂಬಿತವಾಗಿರುತ್ತದೆ.

ಸಹ್ಯಾದ್ರಿ ಕೆಂಪಡಿಕೆ ಸಾಗರ ಸ್ಥಳೀಯ ತೀರ್ಥಹಳ್ಳಿ ಸ್ಥಳೀಯ ದಕ್ಷಿಣ ಕನ್ನಡ ಸ್ಥಳೀಯ SAS-1 SAS-2 SAS-3 ಮಂಗಳ ಸುಮಂಗಳ ಶ್ರೀಮಂಗಳ ಮೋಹಿತ್ ನಗರ ಸ್ವರ್ಣಮಂಗಳ ಮಧುರಮಂಗಳ ಶತಮಂಗಳ VTLAH-1 VTLAH-2
Propagation

ಸಸ್ಯಾಭಿವೃದ್ಧಿ ಕ್ರಮಗಳು

ತಾಯಿ ಮರಗಳನ್ನು ಗುರುತಿಸುವುದು

ಮಧ್ಯಮ ವಯಸ್ಸಿನ (15 ರಿಂದ 30 ವರ್ಷ) ಆರೋಗ್ಯವಂತ ಮರಗಳನ್ನು ಆಯ್ಕೆ ಮಾಡಬೇಕು. ಕನಿಷ್ಟ 12 ಎಲೆಗಳಿರುವ ಹಾಗೂ ಗೆಣ್ಣುಗಳು ಹತ್ತಿರವಿರುವ ಮರಗಳಲ್ಲಿ ಮಧ್ಯಭಾಗದ ಪೂರ್ಣ ಹಣ್ಣಾದ ಗೊನೆಗಳಿಂದ 25-30 ಗ್ರಾಂಗಿಂತ ಹೆಚ್ಚು ತೂಕದ ಕಾಯಿಗಳನ್ನು ಆರಿಸಬೇಕು.

1. ಸಸಿಮಡಿಗಳಲ್ಲಿ ಗೋಟು ಹಾಕುವುದು

ಅ) ಪ್ರಾಥಮಿಕ ಸಸಿ ಮಡಿ

ಆರಿಸಿದ ಕಾಯಿಗಳನ್ನು ಕೊಯ್ಲು ಮಾಡಿದ 8-10 ದಿನಗಳಲ್ಲಿ ಭಾಗಶಃ ನೆರಳಿರುವ ಮಡಿಗಳಲ್ಲಿ ನೆಡಬೇಕು. 30 ಸೆಂ.ಮೀ. ಆಳದ ಕಾಲುವೆಗಳನ್ನು ಮರಳಿನಿಂದ ತುಂಬಿ, ತೊಟ್ಟಿನ ಭಾಗ ಮೇಲಿರುವಂತೆ 5 ಸೆಂ.ಮೀ. ಅಂತರದಲ್ಲಿ ನಾಟಿ ಮಾಡಬೇಕು. ಸುಮಾರು 45 ದಿನಗಳಲ್ಲಿ ಮೊಳಕೆ ಒಡೆಯುತ್ತದೆ.

ಆ) ದ್ವಿತೀಯ ಸಸಿಮಡಿ

2-3 ಎಲೆಗಳ ಸಸಿಗಳನ್ನು 25 × 15 ಸೆಂ.ಮೀ ಪಾಲಿಥೀನ್ ಚೀಲಗಳಲ್ಲಿ ಮಣ್ಣು : ಗೊಬ್ಬರ : ಮರಳು (3:1:1) ಮಿಶ್ರಣ ತುಂಬಿ ನಾಟಿ ಮಾಡಬೇಕು. 10 × 10 ಅಡಿಯಲ್ಲಿ 1200-1500 ಸಸಿಗಳಿಗೆ ಸ್ಪ್ರಿಂಕ್ಲರ್ ಮೂಲಕ ನೀರು ಒದಗಿಸಬೇಕು.

2. ಪಾಲಿಥಿನ್ ಚೀಲಗಳಲ್ಲಿ ಸಸ್ಯಾಭಿವೃದ್ಧಿ

25 × 15 ಸೆಂ.ಮೀ ಪಾಲಿಥಿನ್ ಚೀಲಗಳಲ್ಲಿ ಮಣ್ಣು : ಗೊಬ್ಬರ : ಮರಳು (3:1:1) ಮಿಶ್ರಣ ತುಂಬಿ ನೇರವಾಗಿ ಗೋಟುಗಳನ್ನು ನಾಟಿ ಮಾಡುವುದರಿಂದ ಶೇಕಡಾವಾರು ಮೊಳಕೆ ಪ್ರಮಾಣ ಹೆಚ್ಚಾಗಿ ಸಸಿಗಳು ಬೇಗ ನಾಟಿಗೆ ಸಿದ್ಧವಾಗುತ್ತವೆ. ನಾಟಿ ಮಾಡಲು 12-18 ತಿಂಗಳ ವಯಸ್ಸಿನ, ಕನಿಷ್ಠ 5 ಗರಿಗಳಿರುವ ಗಿಡ್ಡ ಸಸಿಗಳನ್ನು ಆರಿಸಬೇಕು.

ನಾಟಿಯ ಕಾಲ ಮತ್ತು ಸಸಿಗಳನ್ನು ನೆಡುವುದು Planting Time & Method

  • ಮಲೆನಾಡು ಹಾಗೂ ಕರಾವಳಿ — ಆಗಸ್ಟ್/ಸೆಪ್ಟೆಂಬರ್; ಮೈದಾನ — ಮೇ/ಜೂನ್. ನೀರಾವರಿ ಇದ್ದರೆ ಏಪ್ರಿಲ್/ಮೇ ಸಹ ಸಾಧ್ಯ.
  • ಉತ್ತರ–ದಕ್ಷಿಣ ದಿಕ್ಕಿನ ಸಾಲುಗಳನ್ನು 35° ಪಶ್ಚಿಮಕ್ಕೆ ವಾಲಿಸಿ ಗುರುತು ಮಾಡಿ ಬಿಸಿಲಿನಿಂದಾಗುವ ಹಾನಿ ತಪ್ಪಿಸಬೇಕು.
  • 60 × 60 × 60 ಸೆಂ.ಮೀ ಗಾತ್ರದ ಗುಣಿ — 45 ಸೆಂ.ಮೀ ಆಳದಲ್ಲಿ ಮೇಲ್ಮಣ್ಣು + ಕೊಟ್ಟಿಗೆ ಗೊಬ್ಬರ ತುಂಬಿ 2.7 × 2.7 ಮೀ ಅಂತರದಲ್ಲಿ ನಾಟಿ ಮಾಡುವುದು ಸೂಕ್ತ.
  • ಗಾಳಿ ಹಾನಿ ತಪ್ಪಿಸಲು ಕೋಲಿನ ಆಸರೆ ಕೊಡಬೇಕು.
Nutrient Management

ಪೋಷಕಾಂಶಗಳ ನಿರ್ವಹಣೆ

ಕೊಟ್ಟಿಗೆ ಗೊಬ್ಬರ

FYM

15-20 ಕೆ.ಜಿ. / ಮರ

ಸಾರಜನಕ

Nitrogen

100 ಗ್ರಾಂ / ಮರ / ವರ್ಷ

ರಂಜಕ

Phosphorus

40 ಗ್ರಾಂ / ಮರ / ವರ್ಷ

ಪೊಟ್ಯಾಷ್

Potash

140 ಗ್ರಾಂ / ಮರ / ವರ್ಷ

ಶಿಫಾರಿತ ಗೊಬ್ಬರವನ್ನು 2 ಭಾಗಗಳಲ್ಲಿ ನೀಡಬೇಕು — ಅರ್ಧ ಭಾಗ ಮೇ-ಜೂನ್‌ನಲ್ಲಿ, ಉಳಿದ ಅರ್ಧ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ. ರಾಸಾಯನಿಕ ಗೊಬ್ಬರವನ್ನು ಮರದ ಬುಡದಿಂದ 60 ಸೆಂ.ಮೀ. (2 ಅಡಿ) ದೂರದಲ್ಲಿ, 5-15 ಸೆಂ.ಮೀ. ವೃತ್ತಾಕಾರವಾಗಿ ಮಣ್ಣು ಬಿಡಿಸಿ ಭೂಮಿಗೆ ಸೇರಿಸಬೇಕು. ಮಣ್ಣಿನ ರಸಸಾರ ಮತ್ತು ಲಘು ಪೋಷಕಾಂಶಗಳ ಕೊರತೆಯನ್ನು ಮಣ್ಣಿನ ಪರೀಕ್ಷೆಯ ಆಧಾರದ ಮೇಲೆ ಸರಿಪಡಿಸಬೇಕು.

ಹಸಿರೆಲೆ ಗೊಬ್ಬರದ ನಿರ್ವಹಣೆ

ಮುಂಗಾರಿನ ಪ್ರಾರಂಭದಲ್ಲಿ ಭೂಮಿಯನ್ನು ಉಳಿಮೆ ಮಾಡಿ ಅಲಸಂದೆ, ಹೆಸರು, ಉದ್ದು, ಸೆಣಬು, ಅವರೆ, ಡಯಾಂಚ್, ಸಸ್ಬೆನಿಯಾ ಮುಂತಾದ ದ್ವಿದಳ ಧಾನ್ಯ ಬೆಳೆಗಳನ್ನು ಬಿತ್ತಬೇಕು. 7-8 ವಾರಗಳಲ್ಲಿ ಚೆನ್ನಾಗಿ ಬೆಳೆದ ನಂತರ ಕಾಯಿ ಕಚ್ಚುವ ಮೊದಲೇ ಭೂಮಿಗೆ ಉಳುಮೆ ಮಾಡಿ ಸೇರಿಸಬೇಕು. ಇದು ಮಣ್ಣಿನ ಫಲವತ್ತತೆ ಹಾಗೂ ಭೌತಿಕ-ರಾಸಾಯನಿಕ ಗುಣಗಳನ್ನು ಸುಧಾರಿಸುತ್ತದೆ.

ನೀರಾವರಿ

ಮಣ್ಣಿನ ಗುಣಧರ್ಮ, ಉಷ್ಣತೆ ಮತ್ತು ನೀರಿನ ಲಭ್ಯತೆಗೆ ಅನುಗುಣವಾಗಿ ನೀರಾವರಿ ಮಾಡಬೇಕು. ಬೇರುಗಳು ನೀರಿನಲ್ಲಿ ಮುಳುಗಿರಬಾರದು; ಮೇಲ್ಪದರ ಒಣಗಬಾರದು. ಹನಿ ನೀರಾವರಿ ಪದ್ಧತಿಯಲ್ಲಿ ಪ್ರತಿ ಮರಕ್ಕೆ 18-20 ಲೀಟರ್ ನೀರು ಕೊಡುವುದರಿಂದ ಉತ್ತಮ ಗುಣಮಟ್ಟದ ಕಾಯಿಗಳು ಮತ್ತು ಅಧಿಕ ಇಳುವರಿ ಪಡೆಯಬಹುದು.

ಬಸಿಗಾಲುವೆಗಳ ನಿರ್ವಹಣೆ

ಪ್ರತಿ ಎರಡು ಸಾಲುಗಳಿಗೊಂದರಂತೆ 30 ಸೆಂ.ಮೀ. ಅಗಲ ಮತ್ತು 45-60 ಸೆಂ.ಮೀ. ಆಳದ ಉಪ ಬಸಿಗಾಲುವೆಗಳನ್ನು ತೆಗೆಯಬೇಕು. ತೋಟದ ಸುತ್ತ ಎರಡೂವರೆ ಅಡಿ ಆಳ ಮತ್ತು ಎರಡು ಅಡಿ ಅಗಲದ ಮುಖ್ಯ ಕಾಲುವೆ ಅಗತ್ಯ. ಮುಂಗಾರಿನ ಮೊದಲು ಕಾಲುವೆಗಳನ್ನು ಸ್ವಚ್ಛಗೊಳಿಸಬೇಕು.

ತ್ಯಾಜ್ಯ ಮರುಬಳಕೆ

ಗರಿ ಮತ್ತು ಹಾಳೆಗಳನ್ನು ಚಿಕ್ಕದಾಗಿ ಕತ್ತರಿಸಿ ಎರೆಹುಳು ಕಾಂಪೋಸ್ಟ್‌ಗೆ ಉಪಯೋಗಿಸಬಹುದು. ಮರಗಳ ಸುತ್ತ ಹೊದಿಕೆ ಮಾಡುವುದರಿಂದ ಕಳೆ ನಿಯಂತ್ರಣ ಮತ್ತು ತೇವಾಂಶ ಹಿಡಿದಿಡಲು ಸಹಕಾರಿ. ತ್ಯಾಜ್ಯ ಮರುಬಳಕೆಯಿಂದಲೇ ಬೆಳೆಯ ಶೇ. 30 ರಷ್ಟು ಪೋಷಕಾಂಶ ಬೇಡಿಕೆ ಪೂರೈಸಬಹುದು.

Intercropping Returns

ಅಂತರ ಮತ್ತು ಮಿಶ್ರ ಬೆಳೆಗಳು

ಪ್ರತಿ ರೂಪಾಯಿ ವ್ಯಯಕ್ಕೆ ಬರುವ ಆದಾಯ (Returns per ₹1 spent)

ಅಡಿಕೆ + ಕೋಕೋ

Areca + Cocoa (8-10 yr later)

₹3.17

ಅಡಿಕೆ + ಬಾಳೆ + ಕಾಳುಮೆಣಸು

Multistorey crops

₹3.28

ಏಕಬೆಳೆ ಅಡಿಕೆ

Areca monocrop

₹1.98

ಅಡಿಕೆ ಕೊಯ್ಲು ಮತ್ತು ಸಂಸ್ಕರಣೆ Harvest & Processing

ಸಸಿಗಳು ನಾಟಿ ಮಾಡಿದ 5-7 ವರ್ಷದಲ್ಲಿ ಕೊಯ್ಲಿಗೆ ಸಿದ್ಧವಾಗುತ್ತವೆ. ಪ್ರತಿ ಹೆಕ್ಟೇರ್‌ಗೆ 15-18 ಕ್ವಿಂಟಾಲ್ ಸಂಸ್ಕರಿಸಿದ ಒಣ ಅಡಿಕೆಯನ್ನು ಪಡೆಯಬಹುದು.

ಚಾಲಿ

ಹಣ್ಣಾದ ಅಡಿಕೆಯನ್ನು ಕೊಯ್ಲು ಮಾಡಿ ಬಿಸಿಲಿನಲ್ಲಿ 35-40 ದಿನ ಒಣಗಿಸಿ, ನಂತರ ಸಿಪ್ಪೆ ಸುಲಿದು ಬೇರ್ಪಡಿಸಬೇಕು.

ರಾಶಿ / ಕೆಂಡಿಕೆ

6-7 ತಿಂಗಳ ಎಳೆಯ ಕಾಯಿಗಳ ಸಿಪ್ಪೆ ಸುಲಿದು ಇಡಿಯಾಗಿ ಅಥವಾ ಹೋಳುಗಳಾಗಿ ಕತ್ತರಿಸಿ ಹೊನ್ನೆ/ನೇರಳೆ/ಬಾಳೆ ದಿಂಡು/ಬೆಲ್ಲ/ಸುಣ್ಣ ಸೇರಿದ ನೀರಿನಲ್ಲಿ ಬೇಯಿಸಿ ಬಿಸಿಲಿನಲ್ಲಿ ಒಂದು ವಾರ ಒಣಗಿಸಬೇಕು.

Storage

ಅಡಿಕೆ ದಾಸ್ತಾನಿಡುವಿಕೆ

ಗಾಳಿಯಾಡುವ ಕೊಠಡಿಗಳಲ್ಲಿ ಸಿಮೆಂಟ್ ಅಥವಾ ಕಲ್ಲಿನ ಹಾಸಿನ ಮೇಲೆ ದಾಸ್ತಾನಿಡಬೇಕು. ಒಣಗಿಸಿದ ಅಡಿಕೆಯಲ್ಲಿ ತೇವಾಂಶ ಶೇ. 10-12 ಕ್ಕಿಂತ ಹೆಚ್ಚಿದ್ದರೆ ಶಿಲೀಂಧ್ರಗಳ ಬೂಸ್ಟು ಬೆಳೆದು ಬಣ್ಣ, ಗುಣಮಟ್ಟ ಮತ್ತು ತೂಕ ಎರಡೂ ನಷ್ಟವಾಗುತ್ತದೆ. ದೀರ್ಘಕಾಲಿಕ ದಾಸ್ತಾನಿಗೆ ಪ್ಲಾಸ್ಟಿಕ್ ಚೀಲಗಳನ್ನು ಬಳಸಿ.